Tuesday, 12 April 2016

ಯುಗ ಯುಗಾದಿ ಕಳೆದರೂ....


ಫೇಸ್ ಬುಕ್ ನಲ್ಲಿ ಅನಪೇಕ್ಷಿತವಾಗಿ ನೋಡಿದ ಒಂದು ಚಟುವಟಿಕೆಯೇ ಇಂದಿನ ನನ್ನ ಬರಹಕ್ಕೆ ಹಾಡಿದ ಮುನ್ನುಡಿ. ಅಂದು ಏರ್ಪಾಡಾಗಿದ್ದುದು ಒಂದು ಸಣ್ಣ ಭೋಜನ ಕೂಟ. ಆಯೋಜಿಸಿದವರು ಯಾರೆಂದು ಖಂಡಿತ ಗೊತ್ತಿರಲಿಲ್ಲ. ಅಲ್ಲಿಗೆ ಹೋಗಲೋ ಬೇಡವೋ ಎಂದು ನನ್ನ ಮನಸ್ಸು ತನ್ನಲ್ಲೇ ಬಹಳಷ್ಟು ಸಲ ಲೆಕ್ಕ ಹಾಕಿತು. ಇದರಲ್ಲಿ ಭಾಗಿಯಾಗುವಂತೆ ಹುರಿದುಂಬಿಸಿದ ಹಲವು ಕಾರಣಗಳಲ್ಲಿ, ಕನ್ನಡಿಗರನ್ನು ಅದರಲ್ಲೂ ಹೊರದೇಶದಲ್ಲಿ ಭೇಟಿಯಾಗುವ ಅವಕಾಶ ದೊರಕುವುದೆಂಬುದು ಬಹಳವೇ ಮುಖ್ಯವಾದುದ್ದು.  ಮಾತೃ ಭಾಷೆಯ ಮೇಲಿನ ಮಮಕಾರ ಹಾಗೂ ಅದನ್ನು ಆಡಿದಾಗ ಆಗುವ ಸಂತೋಷಕ್ಕೆ ಪಾರವೇ ಇಲ್ಲ ಎನ್ನುವುದು ಸಾಬೀತಾಗಲು ಮತ್ತೊಂದು ಅವಕಾಶ ಕೂಡ.

ಹಾಗೂ ಹೀಗೂ ನನ್ನ ಮನಸ್ಸು ಭೋಜನ ಕೂಟಕ್ಕೆ ಹೋಗುವಂತೆ ಪ್ರೇರೇಪಿಸಿತು. ಮನಸಿನಲ್ಲೇ ಬಗೆ ಬಗೆಯ ತಿಂಡಿ-ತಿನಿಸುಗಳ ಚಿತ್ರಣ ಬೇರೆ. ಯಾರೂ ಗೊತ್ತಿಲ್ಲದ ಜಾಗದಲ್ಲಿ ಬೆರೆಯಲು ಹಿಂಜರಿಯುತ್ತಿದ್ದ ನನ್ನಲ್ಲಿ ಕಳೆದೆರಡು ವರ್ಷಗಳ ವಿದೇಶ ವಾಸವು ಬಹಳ ದೊಡ್ಡ ಬದಲಾವಣೆಯನ್ನೇ ಮಾಡಿಸಿದೆ ಎಂದರೆ ತಪ್ಪಾಗಲಾರದು. ಸುತ್ತಲೂ ಹೊಸ ಮುಖಗಳು, ಅಲ್ಲಿ ನೆನಪಾದ ಮೊದಲ ಕನ್ನಡ ಚಿತ್ರಗೀತೆಯೇ "ಯಾರು ಯಾರು ನೀ ಯಾರು.. ಎಲ್ಲಿಂದ ಬಂದೆ ಯಾವೂರು". ಅಲ್ಲಿ ಚಿರಪರಿಚಿತವಾಗಿದ್ದದ್ದು ಭಾಷೆಯೊಂದೇ. ಹೊಂದಾಣಿಕೆಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಅಂದು ಅಲ್ಲಿ ಆದದ್ದು ಡೆನ್ಮಾರ್ಕ್ ಕನ್ನಡ ಕೂಟದ ಉಗಮ. ಇದನ್ನೊಂದು ಕುಟುಂಬವೆಂದರೆ ತಪ್ಪಾಗಲಾರದು. ವಿದೇಶದಲ್ಲಿ ಭಾರತೀಯ ಕಲೆ, ಸಂಸ್ಕೃತಿ, ಇತ್ಯಾದಿಗಳನ್ನು ಪಸರಿಸುವ ನಿಟ್ಟಿನಲ್ಲಿ, ಹಾಗೂ ತಮ್ಮ ತಮ್ಮ ಪರಿವಾರಗಳಿಂದ ದೂರವಿರುವ ಎಲ್ಲರಿಗೂ, ಒಟ್ಟಾಗಿ ಸೇರಿ ನಮ್ಮ ಹಬ್ಬ ಹರಿದಿನಗಳ ಆಚರಣೆ ಇತ್ಯಾದಿಗಳಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಂಡು ಬದುಕನ್ನು ಮತ್ತಷ್ಟು ಆಸಕ್ತಿದಾಯಕವಾಗಿ ನಡೆಸುವ ಒಂದು ಸದವಕಾಶವನ್ನು ಈ ಕೂಟ ನಮ್ಮೆಲ್ಲರಿಗೂ ಮಾಡಿಕೊಟ್ಟಿದೆ.

ಕೂಟದ ಸಣ್ಣ ಪುಟ್ಟ ಚಟುವಟಿಕೆಗಳ ನಡುವೆಯೇ ಇಣುಕಿತು ಯುಗಾದಿ. ಹೊಸ ವರುಷದ ಸಂಭ್ರಮಾಚರಣೆಗೆ ವೇದಿಕೆಯಂತೂ ಸಿದ್ಧವಾಗಿದೆ. ಆದರೆ, ಆಚರಿಸುವ ಪರಿ? ಅದಕ್ಕೆಂದೇ ಚಿಕ್ಕದೊಂದು ಸಬೆಯನ್ನು ಹಮ್ಮಿಕೊಳ್ಳಲಾಯಿತು. ಎಲ್ಲರಲ್ಲೂ ಉತ್ಸಾಹ ಉತ್ಸುಕತೆ ಎದ್ದು ಕಾಣುತ್ತಿತ್ತು. ಅಲ್ಲಿಯೂ ಹಲವು ಹೊಸ ಪರಿಚಯಗಳು. ನೆರೆದಿದ್ದ ಎಲ್ಲರೂ ತಮ್ಮ ತಮ್ಮ ಮೆದುಳುಗಳಿಗೆ ಕೊಂಚ ಜಾಸ್ತಿಯೇ ಕೆಲಸ ಕೊಟ್ಟು ಬಗೆ ಬಗೆಯ ಐಡಿಯಾಗಳನ್ನು ಹೊರತಂದರು, ಎರಡೇ ತಾಸಿನಲ್ಲಿ ಕಾರ್ಯಕ್ರಮದ ಕರಡು ಪ್ರತಿ ಸಿದ್ಧ.  ಕಾಯುವುದೇಕಿನ್ನು... ನಮ್ಮ ತಾಲೀಮು ಶುರು. ವಾರಾಂತ್ಯಗಳಲ್ಲಿ ಬಿಟ್ಟ ಕೆಲಸ ಬಿಟ್ಟು ಅಭ್ಯಾಸಕ್ಕೆ ಹಾಜರ್. ಅಲ್ಲಿನ ತಯಾರಿ, ಮೋಜು, ನಗು, ಅಭ್ಯಾಸದ ನಂತರದ ಕೈ ಕಾಲು ನೋವಿನ ಅನುಭವ... ಅನುಭವಿಸಿದವರಿಗೇ ಗೊತ್ತು ಮತ್ತು ಅದನ್ನು ಹಂಚಿಕೊಂಡವರಿಗೇ ಗೊತ್ತು. ಅದನ್ನಂತೂ ವರ್ಣಿಸಲಸಾಧ್ಯ.

ಅಂತೂ ಇಂತೂ ಯುಗಾದಿ ಬಂತು. ಸುಸಜ್ಜಿತವಾಗಿದ್ದ ನಮ್ಮ ತಂಡಕ್ಕೆ ವೇದಿಕೆಯನ್ನು ಸಿದ್ಧಪಡಿಸುವುದರಲ್ಲೇನೂ ಹೆಚ್ಚಿನ ಸಮಯ ಹಿಡಿಯಲಿಲ್ಲ. ಕಾರ್ಯಕ್ರಮವೇನೋ ವಿಜೃಂಭಣೆಯಿಂದ ನೆರವೇರಿತು. ನೆರೆದಿದ್ದ ಬಹಳಷ್ಟು ಮಂದಿ ಕನ್ನಡಿಗರೂ ಹಾಗೂ ವಿದೇಶಿ ವೀಕ್ಷಕರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಿತ್ತು ನಮ್ಮ ಕಾರ್ಯಕ್ರಮ. ಎಲ್ಲರೂ ತಮ್ಮ ತಮ್ಮ ಕಾರ್ಯಕ್ರಮದ ನಂತರ ಪಟ್ಟ ಸಂಭ್ರಮ ಹೇಳತೀರದು. ಅಲ್ಲಿ ಕಂಡದ್ದು ಕೇವಲ ನಗು, ಖುಷಿ, ಸಂತೋಷ ಹಾಗೂ ಸಾರ್ಥಕತೆ. ಅವರವರ ತಂಡದೊಂದಿಗೆ ಆಗಬೇಕಿದ್ದ "ಫೋಟೋ ಸೆಷನ್" ಅಂತೂ ಖಂಡಿತ ಮಿಸ್ ಆಗಲಿಲ್ಲ. ಕಾರ್ಯಕ್ರಮ ಭೋಜನದೊಂದಿಗೆ ಮುಕ್ತಾಯಗೊಂಡಿತು.

ಇದನ್ನೆಲ್ಲ ವರ್ಣಿಸುವ ಮನಸ್ಸಾದದ್ದು ಕೇವಲ ಒಂದು ಕಾರಣದಿಂದ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಯಾವುದೋ ನಿಮಿತ್ತವಾಗಿ ಬಂದು ನೆಲೆಸಿರುವ  ನಮ್ಮೆಲ್ಲರನ್ನೂ ಸೇರಿಸಿ, ನಮ್ಮ ಕಲೆ, ಸಂಸ್ಕೃತಿ, ಕ್ರೀಡೆ ಇನ್ನಿತರ ಹತ್ತು ಹಲವು ಚಟುವಟಿಕೆಗಳನ್ನು ವಿದೇಶಗಳಲ್ಲೂ ಮನಸ್ಪೂರ್ವಕವಾಗಿ ಆಚರಿಸಿ ಹಾಗೂ ಅಷ್ಟೇ ಅದ್ಭುತವಾಗಿ ಕಾರ್ಯರೂಪಕ್ಕೆ ತರಲು "ಡೆನ್ಮಾರ್ಕ್ ಕನ್ನಡ ಕೂಟ"ದಂತಹ ಹಲವಾರು ಸಂಘಗಳು ಮುಂದೆ ಬಂದಿವೆ. ಇದು ಎಷ್ಟೋ ಹೊಸ ಬಾಂಧವ್ಯಗಳ ನಿಮಿತ್ತ. ಬೆಸೆದ ಈ ಬಾಂಧವ್ಯವು ಗಟ್ಟಿಯಾಗುವುದು ಇಂಥ ಸಂಘಗಳನ್ನು ಉಳಿಸಿ, ಬೆಳೆಸಿ, ಪೋಷಿಸುವುದರಿಂದ ಮಾತ್ರ.

Link to the full program:  Denmark Kannada Koota Ugadi Program