Wednesday, 27 December 2017

ಆಂಸ್ಟರ್ಡ್ಯಾಮ್ ಅವಾಂತರ

ನಮ್ಮ ಸ್ವಭಾವಗಳಿಂದ ನಾವೇ ಅಚ್ಚರಿಗೊಂಡು, ನಮ್ಮನ್ನೇ ನಾವು ಗೇಲಿಮಾಡಿಕೊಂಡಾಗ ಸಿಗುವ ಸಂತೋಷ ಅಷ್ಟಿಷ್ಟಲ್ಲ. ನನ್ನ ಸ್ವಾನುಭವವೂ ಇದಕ್ಕೆ ಹೊರತೇನಲ್ಲ. ಇದು ನನ್ನ ಪಿಎಚ್ ಡಿ ಪದವಿಯ ಶುರುವಿನಲ್ಲಿ ನಡೆದ ಒಂದು ಸಣ್ಣ ಘಟನೆ.
ಈ ಪಿಹೆಚ್ ಡಿ ಪ್ರಾಜೆಕ್ಟಿನಲ್ಲಿ ನನ್ನ ಕೆಲಸ ಇರುವುದು ಫ್ರಾನ್ಸ್ ಮತ್ತು ಆಂಸ್ಟರ್ಡ್ಯಾಮ್ ದೇಶಗಳ ನಡುವೆ.  ಆಂಸ್ಟರ್ಡ್ಯಾಮ್ ಗೆ ಅದು ನನ್ನ ಮೊದಲ ಭೇಟಿಯಾಗಿತ್ತು. ನನ್ನ ಬಾಸ್ ನ ಸಲಹೆಯ ಮೇರೆಗೆ, ಪ್ರಾಜೆಕ್ಟಿನ ಆಗುಹೋಗುಗಳ ಕುರಿತಾಗಿ ಚರ್ಚಿಸಿ, ನಡೆಯಬೇಕಾಗಿದ್ದ ಕಾರ್ಯಕಲಾಪಗಳ ಬಗ್ಗೆ ವಿಚಾರ ವಿನಿಮಯ ಮಾಡುವ ಸಲುವಾಗಿ ಈ ಮೀಟಿಂಗ್ ಆಯೋಜಿತವಾಗಿತ್ತು.  ಮಂಗಳವಾರದಿಂದ ಶುಕ್ರವಾರದವರೆಗೆ ನನ್ನ ಪ್ರವಾಸ ಎಂದು ನನ್ನ ತಲೆಯಲ್ಲಿ  ನೋಂದಾಯಿಸಿಕೊಂಡಿದ್ದೆ . ಅದರಂತೆಯೇ ಎಲ್ಲಾ ಚಟುವಟಿಕೆಗಳೂ ಬಹಳ ಚೆನ್ನಾಗಿ ಹಾಗೂ ಫಲಕಾರಿಯಾದಿಯೇ ಕೈಗೂಡಿದವು. ನನಗೆ ಅಲ್ಲಿಂದ ವಾಪಸ್ ಪ್ರಾನ್ಸ್ ಗೆ ಬಂದು ಕೆಲಸ ಮುಂದುವರೆಸುವ ಕಾತರ. ಶುಕ್ರವಾರ ನನ್ನ ಸಹೋದ್ಯೋಗಿಗಳಿಗೆಲ್ಲ ಸಂಭ್ರಮದಿಂದ ಬೈ ಹೇಳಿ ಮಧ್ಯಾಹ್ನ ೩.೩೦ ಕ್ಕೆ ಇದ್ದ ರೈಲಿಗೆ, ಆಫೀಸಿನಿಂದ ೧.೩೦ಕ್ಕೇ ಹೊರಟೆ. ಪ್ಲಾಟ್ ಫಾರಂ ನಲ್ಲಿ ರೈಲಿನ ಸಂಖ್ಯೆ ಹಾಗೂ ಸಮಯವನ್ನು ಖಾತರಿಪಡಿಸಿಕೊಂಡು, ಪಕ್ಕದಲ್ಲೇ ಇದ್ದ ಬೆಂಚಿನ ಮೇಲೆ ಕೊರೆಯುವ ಚಳಿಯಲ್ಲೇ ಕುಳಿತೆ.

ರೈಲು ಸರಿಯಾದ ಸಮಯಕ್ಕೆ ಬಂದದ್ದೂ ಅಯ್ತು, ನಾನು ಹತ್ತಿದ್ದೂ ಆಯ್ತು. ನನ್ನ ಸೀಟಿನ ಬಳಿ ನಡೆದೆ. ನನ್ನ ಸೀಟಿನಲ್ಲಿ ಆಗಲೇ ಒಬ್ಬಾಕೆ ಕುಳಿತಿದ್ದಳು. ಅಲ್ಲಿಂದ ಶುರು ನನ್ನ ಗೊಂದಲ. ಅವಳ ಪಕ್ಕದಲ್ಲಿ ಅವಳ ಪಾರ್ಟ್ನರ್ ಕೂಡ ಕುಳಿತಿದ್ದ. ಅವರನ್ನು ನೋಡಿ ನನಗೇನೋ ಅಚ್ಚರಿ. ನನ್ನ ಟಿಕೆಟ್ ತೆಗೆದು, ಸೀಟ್ ನಂಬರ್ ಅನ್ನು ಮತ್ತೆ ಪರೀಕ್ಷಿಸಿದೆ. "ಸರಿಯಾಗಿಯೇ ಇದೆ" (ಅವರನ್ನು ಪ್ರಶ್ನಿಸುವ ಮುನ್ನ ಮನದಲ್ಲೇ ನನ್ನ ಮಾತು). ಕೊನೆಗೆ ಅವಳ ಬಳಿಗೆ ಹೋಗಿ ನನ್ನ ಕೋರಿಕೆ "ನೀವು ನನ್ನ ಸೀಟಿನಲ್ಲಿ ಕುಳಿತಿದ್ದೀರೇನೋ ಎಂದು ನನ್ನ ಭಾವನೆ. ಇದೋ ನೋಡಿ, ನನ್ನದೂ ಅದೇ ಸೀಟ್ ನಂಬರ್. ಕುಡ್ ಯು ಪ್ಲೀಸ್ ಚೆಕ್" ಎಂದೆ. 
ಆಕೆಯೂ ನನ್ನಷ್ಟೇ ಆತ್ಮವಿಶ್ವಾಸದಿಂದ, "ಯೆಸ್, ಇದು ನನ್ನ ಸೀಟ್ ನಂಬರ್ ಸಹ. ಐ ಹ್ಯಾವ್ ಅ ವ್ಯಾಲಿಡ್ ಟಿಕೆಟ್ ಟೂ" ಎಂದು ಅವಳ ಟಿಕೆಟ್ ತೋರಿಸಿದಳು. ಪರೀಕ್ಷಿಸಿದೆ. ಸರಿಯಾಗಿಯೇ ಇದೆ. ನನ್ನಲ್ಲೇನೋ ಕಸಿವಿಸಿ. ಮನದಲ್ಲೇ ಪ್ರಶ್ನೆಗಳು. ಇದು ಹೇಗೆ ಸಾಧ್ಯ? ಬುಕ್ಕಿಂಗ್ ಎರರ್ ಇರಬಹುದೇ ಎಂದು ಆಕೆಯತ್ತ ಪ್ರಶ್ನಾರ್ಥಕವಾಗಿ ನೋಡಿದೆ.

ನಾನು ಅಲ್ಲಿಂದ ಕದಲದಿದ್ದನ್ನು ಕಂಡ ಆಕೆಯ ಬಾಯ್ ಫ್ರೆಂಡ್, ನನ್ನನ್ನು ಗೇಲಿ ಮಾಡುವ ಉದ್ದೇಶದಿಂದಲೋ ಅಥವಾ ಅಲ್ಲಿಂದ ಹೊರಡು ಎಂಬ ಮುನ್ಸೂಚನೆ ಕೊಡಲೆಂದೋ ಎನೋ, ವ್ಯಂಗ್ಯವಾಗಿ "ವುಡ್ ಯು ಲೈಕ್ ಟು ಸಿಟ್ ಆನ್ ಹರ್ ಲ್ಯಾಪ್" ಎಂದ. ನನಗೆ ಸ್ವಲ್ಪ ಕಸಿವಿಸಿಯಾಯಿತು. "ಲೆಟ್ ಮಿ ವೈಟ್ ಫ಼ಾರ್ ದ ಟಿಕೆಟ್ ಇನ್ಸ್ಪೆಕ್ಟರ್" ಎಂದು ಹೇಳಿ, ಅಲ್ಲೇ ಎರಡು ಸಾಲು ಪಕ್ಕಕ್ಕೆ ಸರಿದು. ಎದುರಿನ ಸೀಟೀನಲ್ಲಿ ಕುಳಿತೆ. ರೈಲು ಅಷ್ಟರಲ್ಲಾಗಲೇ ಮುಂದಿನ ನಿಲ್ದಾಣದತ್ತ ಧಾವಿಸುತ್ತಿತ್ತು. ನನ್ನ ಕಳವಳವಂತೂ ನಿಂತಿಲ್ಲ. ಮತ್ತೊಮ್ಮೆ ಟಿಕೆಟ್ ಪರೀಕ್ಷಿಸಿದೆ. ರೈಲಿನ ಸಮಯ, ಸೀಟ್ ನಂಬರ್ ಸರಿಯಾಗಿಯೀ ಇದೆ. ಇಂಥ ಸನ್ನಿವೇಶ ನಡೆಯಲು ಸಾಧ್ಯವೇ ಇಲ್ಲ. ಇದರಲ್ಲಿ ಇಬ್ಬರಲ್ಲೊಬ್ಬರದೇ ಮೂರ್ಖತನ ಎಂದು ಮನಸ್ಸು ಕೂಗಿ ಹೇಳುತ್ತಿದೆ. ಇದೆಲ್ಲಾ ನಡೆದದ್ದು ಕೇವಲ ೫ ನಿಮಿಷಗಳ ಕಾಲಾವಧಿಯಲ್ಲಿ.

ಆಂಸ್ಟರ್ಡ್ಯಾಮ್ ನ ಸ್ಕಿಪೋಲ್ ವಿಮಾನ ನಿಲ್ದಾಣದತ್ತ ಧಾವಿಸಿದ ರೈಲು, ನಿಲ್ದಾಣದಲ್ಲಿ ನಿಂತಿತು. ಎರಡು ಬಾಗಿಲುಗಳಿಂದಲೂ ಹತ್ತುತ್ತಿರುವ ಪ್ರಯಾಣಿಕರನ್ನು ಹಾಗೇ ಕುಳಿತಲ್ಲಿಂದಲೇ ಗಮನಿಸಿದೆ. ನಾನು ಕುಳಿತ ಸೀಟಿನತ್ತ ಯಾರೂ ಬರದಿರಲೆಂದು ಒಂದು ಪುಟ್ಟ ಪ್ರಾರ್ಥನೆ ಕೂಡ ಮಾಡಿದೆ. ಬಲಗೈಲಿದ್ದ ನನ್ನ ಫ಼ೋನಿನಲ್ಲಿ ಟೈಮ್ ನೋಡಿದೆ. ಅದರ ಕೆಳಗಡೆಯೇ ಇದ್ದ ದಿನಾಂಕವೂ ಕಣ್ಣಿಗೆ ಬಿತ್ತು (೮ ಡೆಸೆಂಬರ್). ತಕ್ಷಣ ಎಡಗೈಲಿದ್ದ ಟಿಕೆಟ್ ನೋಡಿದೆ. ಸಮಯವೇನೋ ಸರಿಯಾಗಿದೆ. ಆದರೆ ದಿನಾಂಕ ೯ ಡಿಸೆಂಬರ್!!! ಕಣ್ಣು ದಿನಾಂಕದತ್ತ ಗಮನಹರಿಸಿದ್ದು ಇಷ್ಟು ಹೊತ್ತಿನಲ್ಲಿ, ಇದೇ ಮೊದಲ ಸಲ. ಇನ್ನು ಕೆಲವೇ ಸೆಕೆಂಡುಗಳಲ್ಲಿ ರೈಲು ಹೊರಡಬಹುದೆನ್ನುವ ಆತಂಕ ಹಾಗೂ ಅಷ್ಟರಲ್ಲಿ ರೈಲಿನಿಂದ ಇಳಿಯಬೇಕೆನ್ನುವ ತವಕ. ಸಮಯದ ವೇಗ ಮನವರಿಕೆಯಾಗಲು ಇದಕ್ಕಿಂತ ಒಳ್ಳೆಯ ಸಂದರ್ಭ / ಉದಾಹರಣೆ ಬೇಕೆನಿಸಲಿಲ್ಲ. (ನನಗಿದ್ದದ್ದು ಎರಡೇ ಆಯ್ಕೆ - ಪ್ರಯಾಣ ಮುಂದುವರೆಸಿ, ಟಿಕೆಟ್ಟಿನ ವ್ಯತ್ಯಾಸದ ಮೊತ್ತ ಭರಿಸುವುದು ಅಥವಾ ಬಂದ ದಾರಿಯಲ್ಲೇ ನಿರ್ಗಮಿಸಿ, ಮಾರನೆಯ ದಿನ ಮತ್ತೆ ಹೊರಡುವುದು.) ಓಹ್ ಗಾಡ್ ಎಂದು ಅಲ್ಲಿಂದ ಎದ್ದೆ. ಯೋಚಿಸಲು ಸಮಯವೆಲ್ಲಿದೆ? ನಾನು ಬಾಗಿಲಿನ ಬಳಿ ತಲುಪುವುದರೊಳಗೆ ರೈಲು ಹೊರಟರೂ ಅಚ್ಚರಿಯೇನಿಲ್ಲ. ಆದರೂ, ಮನಸ್ಸಿನ ಹಠಾತ್ ನಿರ್ಧಾರವನ್ನು ಪರಿಗಣಿಸಿ ಮೇಲಿದ್ದ ಕ್ಯಾಬಿನ್ ಲಗೇಜನ್ನು ಧಡಕ್ಕನೆ ಕೆಳಗಿಳಿಸಿ, ಬಾಗಿಲಿನತ್ತ ಹೊರಟರೆ, ಹತ್ತುವ ಪ್ರಯಾಣಿಕರ ಉದ್ದದ ಸಾಲು. "ಐ ರಿಯಲೀ ನೀಡ್ ಟು ಗೆಟ್ ಡೌನ್. ಪ್ಲೀಸ್ ಎಕ್ಸ್ಕ್ಯೂಸ್ ಮಿ" ಎಂದೆ. ನನ್ನ ಮುಖಚರ್ಯೆಯಿಂದ ನನ್ನ ಗಡಿಬಿಡಿಯನ್ನರಿತೋ ಎನೋ, ಕೂಡಲೇ ನನಗೆ ದಾರಿ ಬಿಟ್ಟು ಪಕ್ಕಕ್ಕೆ ಸರಿದರು. ಬಾಗಿಲ ಬಳಿ ನಿಂತಿದ್ದ ಟಿಕೆಟ್ ಇನ್ಸ್ಪೆಕ್ಟರ್ ಗೂ ಆಶ್ಚರ್ಯ. "ಮ್ಯಾಮ್, ಡೋಂಟ್ ಯು ವಾಂಟ್ ಟು ಕಂಟಿನ್ಯೂ ಯುವರ್ ಜರ್ನಿ ಟು ಪ್ಯಾರಿಸ್" ಎಂದು ವಿನಯದಿಂದ ಕೇಳಿದರು.
ನನ್ನ ಮರೆಗುಳಿತನದ ಬಗ್ಗೆ ನನ್ನೊಳಗಿಂದ ಭುಗಿಲೆದ್ದು ಬರುತ್ತಿದ್ದ ನಗುವನ್ನು ಕಷ್ಟಪಟ್ಟು ತಡೆದು, ನಾನೂ ವಿನಯದಿಂದಲೇ "ನೋ, ಐ ಹ್ಯಾವ್ ಟು ಲೀವ್ ನೌ, ಥ್ಯಾಂಕ್ ಯು" ಎಂದೆ. ನನ್ನನ್ನು ಪರೋಕ್ಷವಾಗಿ ಬೀಳ್ಕೊಟ್ಟ ಇನ್ಸ್ಪೆಕ್ಟರ್ನತ್ತ ಒಂದು ಮುಗುಳ್ನಗೆ ಬೀರಿ, ಪ್ಲಾಟ್ ಫ಼ಾರಂ ನ ಸಮೀಪದಲ್ಲಿದ್ದ ಕುರ್ಚಿಯ ಬಳಿ ಬಂದು  ಕುಳಿತೆ. ನನ್ನ ಅವಾಂತರವನ್ನು ಮರುಕಳಿಸುತ್ತಾ ಹೊಟ್ಟೆ ತುಂಬಾ ನಕ್ಕೆ. ಆ ನಗುವಿನೊಂದಿಗೆ ಮಾಡಿದ ಮೊದಲ ಕೆಲಸವೇ  ವಾಟ್ಸ್ ಆಪ್ ನ ತಲೆಹರಟೆ ಗ್ರೂಪಿನಲ್ಲಿ ನನ್ನ ಈ ಸಂದೇಶ. " ಬ್ಯಾಕ್ ಟು ಆಮ್ಸ್ಟರ್ಡ್ಯಾಮ್. ಪ್ಯಾರಿಸ್ ಪ್ರಯಾಣ ಇರೋದು ಇವತ್ತಲ್ಲ, ನಾಳೆ!!!".