Wednesday, 22 April 2015

ಅರೋರ ಅನುಭವ

                                                                                                                                                                                                                                      
ಬಹಳ ದಿವಸಗಳ ಬಯಕೆ. ಶಾಲೆಯ ಸಮಾಜ-ವಿಜ್ಞಾನ ಪುಸ್ತಕದಲ್ಲಿ ಧ್ರುವ ಪ್ರದೇಶಗಳ ಬಗ್ಗೆ ಓದಿದ್ದು, ನ್ಯಾಷನಲ್ ಜಿಯಾಗ್ರಫಿಯ ಕೆಲವು ಸಾಕ್ಷ್ಯಚಿತ್ರಗಳನ್ನು ನೋಡಿ ಅಸ್ವಾದಿಸಿದ್ದು, ಹಾಗೂ ನಿಜವಾಗಿ ಅದನ್ನು ವೀಕ್ಷಿಸಿ ಬಂದವರ ಅನುಭವಗಳನ್ನು ಅಲ್ಲಿ ಇಲ್ಲಿ ಓದಿದ್ದು, ಕೇಳಿದ್ದರ ಹೊರತಾಗಿ, ಅದರ ಬಗ್ಗೆ ಬೇರಾವ ಸಣ್ಣ ಕಲ್ಪನೆಯೂ ಇರಲಿಲ್ಲ. ನಮ್ಮ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ವಿಧ್ಯಾರ್ಥಿಗಳ ಸಂಘದಿಂದ ಆಯೋಜಿಸಲಾಗಿದ್ದ ಈ ಪ್ರಸ್ತುತ ಪ್ರವಾಸವು ಉತ್ತರ ಧ್ರುವದ ನಿಜವಾದ ಸೌಂದರ್ಯವನ್ನು ಆಸ್ವಾದಿಸುವ ಮತ್ತು ಅದನ್ನು ಅಷ್ಟೇ ಉತ್ಸಾಹದಿಂದ ಹಂಚಿಕೊಳ್ಳುವ ಈ ಸದವಕಾಶವನ್ನು ಕಲ್ಪಿಸಿತು. 
With Siberian Huskies

ನಮ್ಮ ತಂಡದಲ್ಲಿದ್ದದ್ದು ಬರೋಬ್ಬರಿ 30 ಮಂದಿ. ಇದ್ದ ಮೂವರು ಮೇಲ್ವಿಚಾರಕರಲ್ಲಿ ನಾನೂ ಒಬ್ಬಳು. ನಾವು ನೋಡಲು ಹೊರಟ ಸ್ಥಳದ ಹೆಸರು ಲ್ಯಾಪ್ ಲ್ಯಾಂಡ್; ಸ್ವೀಡನ್ನಿನ ಉತ್ತರದ ತುದಿಯಲ್ಲಿರುವ ಕಿರೂನ ಎಂಬ ಪುಟ್ಟದೊಂದು ಊರಿಗೆ ನಮ್ಮ ಪ್ರವಾಸ ಹೊರಟಿತ್ತು. ಸ್ವೀಡನ್ನಿನ ಮೂಲಕ ಹಾದುಹೋಗುವ ಆರ್ಕ್ಟಿಕ್ ವೃತ್ತದಿಂದ ಸುಮಾರು 145 ಕಿ.ಮೀ. ಉತ್ತರಕ್ಕೆ ಪ್ರಯಾಣ ಬೆಳೆಸಿದರೆ ಸಿಗುವ ಊರೇ ಕಿರೂನ. ಸ್ಟಾಕ್ ಹೋಮ್ ನ ಅರ್ಲಾಂಡ ವಿಮಾನ ನಿಲ್ದಾಣದಿಂದ ಕೇವಲ 1.35 ಗಂಟೆ ಪ್ರಯಾಣವು ನಮ್ಮ 5 ದಿವಸಗಳ ಪ್ರವಾಸಕ್ಕೆ ಚಾಲನೆ ನೀಡಿತು. ಕಪ್ಪು-ಬಿಳುಪಿನಾಟಕ್ಕೆ ಸಿಕ್ಕ ಮೊದಲ ಉದಾಹರಣೆಯೇ ಕರಿ ರನ್ ವೇ ಇಂದ ಟೇಕ್ ಆಫ್ ಆದ ವಿಮಾನ ಬಿಳಿ (ಹಿಮ)ಯ ರನ್ ವೇ ಮೇಲೆ ಲ್ಯಾಂಡ್ ಆಗಿದ್ದನ್ನು ಕಂಡು ನಮಗಾದ ಅಚ್ಚರಿ. ಹೀಗೂ ಉಂಟೇ ಎನ್ನುವಂಥ ಬಹಳಷ್ಟು ಸನ್ನಿವೇಷಗಳಲ್ಲಿ ಬಹುಶಃ ಇದು ಮೊದಲನೆಯದು.

LKAB Mining Area

ಕಿರೂನ ವಿಮಾನ ನಿಲ್ದಾಣದಿಂದ ಪ್ರವಾಸಿ ಮಂದಿರಕ್ಕೆ ಲಗ್ಗೆಯಿಟ್ಟ ನಮ್ಮ ಗುಂಪು, ಟಿಕೆಟ್ ಕೊಂಡು LKAB ಸಂಸ್ಥೆಯ ವಿಶ್ವದ ಅತಿ ದೊಡ್ಡ ಕಬ್ಬಿಣದ ಅದಿರಿನ ಗಣಿಯನ್ನು ನೋಡಲು ಕಾತುರದಿಂದ ಕಾದಿತ್ತು. ಆ ಸಂಸ್ಥೆಯ ಪ್ರವಾಸಿ ಮಾರ್ಗದರ್ಶಕರು ನೆಲಮಟ್ಟದಿಂದ ಸುಮಾರು 500ಮೀಟರ್ ಆಳಕ್ಕೆ ನಮ್ಮನ್ನು ಬಸ್ ನಲ್ಲಿ ಕೊಂಡೊಯ್ದು, ಗಣಿಗಾರಿಕೆ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಒಂದು ಉಲ್ಲಾಸದಾಯಕ ಫಿಕಾದೊಂದಿಗೆ ನಮ್ಮನ್ನು ಬೀಳ್ಕೊಟ್ಟರು.

ಕಿರೂನ ನಗರದಿಂದ ಸುಮಾರು ೧೫ಕಿ.ಮೀ. ದೂರದಲ್ಲಿರುವ, ಹಿಮಾಚ್ಛಾದಿತ ಅರಣ್ಯಗಳ ನಡುವೆ ನಿರ್ಮಿತವಾಗಿರುವ ವಸತಿ ಗೃಹ "ಕ್ಯಾಂಪ್ ಆಲ್ತ", ದಣಿದಿದ್ದ ನಮ್ಮೆಲ್ಲರನ್ನೂ ಕೈಬೀಸಿ ಕರೆಯುತ್ತಿತ್ತು. ಆಲ್ತಯಾರ್ವಿ (Alttajärvi) ಎಂಬ ಪುಟ್ಟ ಹಳ್ಳಿಯ, ಹೆಪ್ಪುಗಟ್ಟಿದ ಸರೋವರ "ಆಲ್ತ"ದ ಸಮೀಪದಲ್ಲಿರುವ ಈ ಸ್ಥಳದಲ್ಲಿ, ಚಳಿಗಾಲದ ಉಡುಪುಗಳಿಂದ ಹಿಡಿದು, ಸೌನಾ, ಕ್ಯಾಂಪ್ ಫ಼ೈರ್, ಐಸ್ ಫಿಷಿಂಗ್ ನಂತಹ ಆಕರ್ಷಕ ಚಟುವಟಿಕೆಗಳೂ ಲಭ್ಯ. ದಿನಕ್ಕೆ ಕೇವಲ 3-4 ಗಂಟೆಗಳಷ್ಟೇ ಕಾಣಸಿಗುತ್ತಿದ್ದ ಸೂರ್ಯನ ಬೆಳಕು, ಉಳಿದ ಸುಮಾರು 2೦ ಗಂಟೆಗಳೂ ಕವಿದಿರುವ ಕಗ್ಗತ್ತಲು, ದೃಷ್ಟಿ ಹಾಯಿಸಿದಷ್ಟೂ ವಿಶಾಲವಾಗಿ ಹರಡಿದ್ದ ಹಿಮದ ರಾಶಿ, -1೦ ಡಿಗ್ರಿಗೂ ಕಡಿಮೆ ತಾಪಮಾನ, ಹಗಲು-ರಾತ್ರಿಯೆನ್ನದೆ ಸುರಿಯುವ ಹಿಮದ ಮಳೆ, ಇದು ಆ ಪ್ರದೇಶಕ್ಕೆ ಹೇಳಿ ಮಾಡಿಸಿದಂಥ ಹವಾಮಾನ.
Camp Alta, Kiruna

ಪ್ರವಾಸದ ಎರಡನೆಯ ದಿನಕ್ಕೆ ಮುನ್ನುಡಿ ಹಾಡಿದ್ದು, ಡಾಗ್-ಸ್ಲೆಡ್ (ಚಕ್ರವಿಲ್ಲದ ಬಂಡಿಗಳು) ಎಂಬ ರೋಮಾಂಚಕಾರಿ ಚಟುವಟಿಕೆ. ಸ್ವೀಡಿಷ್ ಲ್ಯಾಪ್ ಲ್ಯಾಂಡ್ ನ ಅರಣ್ಯಗಳ ನಡುವೆ , 5 ಆಕರ್ಷಕ, ಅತ್ಯದ್ಭುತ, ಅಷ್ಟೇ ಶಕ್ತಿಯುತ "ಸೈಬೀರಿಯನ್ ಹಸ್ಕಿ” (ಒಂದು ಜಾತಿಯ ಹಿಮದ ನಾಯಿ)ಗಳೊಂದಿಗೆ ಸುಮಾರು ೨೫ಕಿ.ಮೀ. ಪ್ರಯಾಣ ಮಾಡುವ ಅವಕಾಶ ದೊರಕಿತು. ಶಿಬಿರದ ತರಬೇತುದಾರರು, ಇಬ್ಬರನ್ನೊಳಗೊಂಡ ಪ್ರತೀ ತಂಡಕ್ಕೆ, ಬಂಡಿ ಚಾಲನೆ ಮತ್ತು ನಿರ್ವಹಣೆಯ ಕುರಿತು ಒಂದು ಸಣ್ಣ ತರಬೇತಿ ನೀಡಿದರು. ಹಸ್ಕಿಗಳ ಓಟದ ಉತ್ಸಾಹಕ್ಕೆ ಮರುಳಾಗದೆ, ನಿಗದಿತ ಸಮಯದಲ್ಲಿ ಬಂಡಿಗೆ ಬ್ರೇಕ್ ಹಾಕುವಂತೆಯೂ ಮುನ್ನೆಚ್ಚರಿಸಿದರು. ಏರು-ತಗ್ಗುಗಳಿಗಂಜದೆ, -40 ರಿಂದ -50 ಡಿಗ್ರಿ ತಾಪಮಾನದಲ್ಲೂ ಒಂದೇ ವೇಗದಲ್ಲಿ ಮುನ್ನುಗ್ಗಬಯಸುವ ಹಸ್ಕಿಗಳ ಚಾಕಚಕ್ಯತೆ ನಿಜಕ್ಕೂ ವರ್ಣಿಸಲಸಾಧ್ಯ. 12.5 ಕಿ.ಮೀ ಪ್ರಯಾಣದ ನಂತರ ಹಸ್ಕಿಗಳಿಗೂ, ಅದರ ಚಾಲಕರಿಗೂ (ನಮಗೂ) ಒಂದು ಪುಟ್ಟ ವಿರಾಮ ದೊರೆಕಿತು. ತರಬೇತುದಾರರಿಂದ ಮಷ್ರೂಮ್ ಸೂಪ್, ಕಾಫಿ, ಟೀ, ಮತ್ತು ಸ್ಯಾಂಡ್ವಿಚ್ ಸಮಾರಾಧನೆಯ ವೇಳೆ, ಡಾಗ್-ಸ್ಲೆಡ್ ಕ್ಯಾಂಪ್/ಶಿಬಿರ ಮತ್ತು ಅಲ್ಲಿದ್ದ ಸುಮಾರು 3೦೦ ನಾಯಿಗಳ ನಿರ್ವಹಣೆ, ತರಬೇತಿ ಬಗ್ಗೆ ಕೊಟ್ಟ ಮಾಹಿತಿ, ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಿತ್ತು.
During the Dog Sleds


ಅಂಥ ನಡುಗುವ ಚಳಿಯಲ್ಲೂ, ಬೆವರಿಳಿಸುವಂತಹ ಈ ಚಟುವಟಿಕೆಗಳ ನಡುವೆ ಒಂದು ಆರಾಮದಾಯಕ ಪ್ರವಾಸವೂ ಇತ್ತು, ಮೂರನೆಯ ದಿನ, ಸಾಮಿ (ಸ್ಕ್ಯಾಂಡಿನೇವಿಯಾದ ಏಕಮಾತ್ರ ಪುರಾತನ ಸ್ಥಳೀಯ ಪರಂಪರೆ) ಜನಾಂಗದ ವಾಸ ಸ್ಥಳಕ್ಕೆ ನಾವೆಲ್ಲ ಭೇಟಿ ಕೊಟ್ಟೆವು. ಸಾಂಪ್ರದಾಯಿಕವಾಗಿ ಲ್ಯಾಪ್ಸ್ ಅಥವಾ ಲ್ಯಾಪ್ ಲ್ಯಾಂಡರ್ಸ್ ಎಂದು ಕರೆಯಲ್ಪಡುವ ಇವರು, ಉತ್ತರ ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್ ನಂತಹ ಅರ್ಕ್ಟಿಕ್ ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಮಂದಿ. ಸಾಮಿ ಭಾಷೆಯನ್ನು ರೂಢಿಸಿಕೊಂಡಿರುವ ಈ ಜನಾಂಗದ ಮುಖ್ಯ ಕಸುಬು ಹಿಮಸಾರಂಗಗಳ ಪಾಲನೆ. ಅಲ್ಲಿ ನೆಲೆಸಿದ್ದ ಸಾಮಿ ಕುಟುಂಬವೊಂದು, ತಮ್ಮ ಸಂಸ್ಕೃತಿಯ ಪರಿಚಯ ಮಾಡಿಸಿದ್ದಷ್ಟೇ ಅಲ್ಲದೆ, ಆಸಕ್ತ ಪ್ರವಾಸಿಗರಿಗೆ ಹಿಮಸಾರಂಗದ ಸೂಪ್ ಹಾಗೂ ಮಾಂಸದ ರುಚಿಯನ್ನೂ ತೋರಿಸಿಕೊಟ್ಟು, ಹಲವರು ಬಾಯಿ ಚಪ್ಪರಿಸುವಂತೆ ಮಾಡಿತು.



Sami Camp with Reindeers















ನಾಲ್ಕನೇ ದಿನದ ಆಕರ್ಷಣೆ “ಸ್ನೋ-ಮೊಬೈಲ್” (ಹಿಮದ ಮೇಲೆ ಚಲಿಸುವ ವಾಹನ) ಚಾಲನೆ ಹಾಗೂ "ಐಸ್ ಹೋಟೆಲ್" ವೀಕ್ಷಣೆ. ನಮ್ಮ ವಸತಿ ಗೃಹದಿಂದ ಸುಮಾರು 10-12 ಕಿ.ಮೀ. ದೂರದಲ್ಲಿರುವ ಯೂಕಸ್ಯಾರ್ವಿ (Jukkasjärvi) ಎಂಬ ಸಣ್ಣ ಹಳ್ಳಿಗೆ, ಸ್ನೋ-ಮೊಬೈಲ್ ವಾಹನಗಳ ಮೇಲೆ ನಮ್ಮ ಸವಾರಿ ಹೊರಟಿತು. ಪ್ರತೀ ವರ್ಷದ ಚಳಿಗಾಲದಲ್ಲಿ ನಿರ್ಮಿತವಾಗುವ ಐಸ್ ಹೋಟೆಲ್ ಗೆ ಈ ಬಾರಿ ೨೫ನೆಯ ವರ್ಷದ ಸಂಭ್ರಮಾಚರಣೆ. ಟೋರ್ನೆ ನದಿಯ ಸುಮಾರು 1000 ಟನ್ ಮಂಜುಗಡ್ಡೆ ಹಾಗೂ ಸುಮಾರು 30,000 ಟನ್ ಸ್ನೈಸ್ (snice- ಹಿಮ ಮತ್ತು ಮಂಜುಗಡ್ಡೆಯ ಮಿಶ್ರಣ) ನಿಂದ ನಿರ್ಮಿತಗೊಳ್ಳುವ ಈ ಹೋಟೆಲ್, ವಿಶ್ವದ ಮೊಟ್ಟಮೊದಲ, ಅತೀ ದೊಡ್ಡ ಐಸ್ ಹೋಟೆಲ್ ಎಂಬ ಬಿರುದನ್ನೂ ತನ್ನ ಮುಡಿಗೇರಿಸಿದೆ. ವಿಶ್ವದ ನಾನಾ-ದೇಶಗಳಿಂದ ಬಂದ ಆಸಕ್ತ ಕಲೆಗಾರರ ತಂಡವನ್ನೊಳಗೊಂಡು, ತನ್ನದೇ ಶೈಲಿಯಲ್ಲಿ ರೂಪುಗೊಳ್ಳುವ ಈ ಸ್ಥಳಕ್ಕೆ, ಸಾವಿರಾರು ಪ್ರವಾಸಿಗರು ಪ್ರತೀ ವರ್ಷ ಚಳಿಗಾಲದಲ್ಲಿ ಲಗ್ಗೆಯಿಡುತ್ತಾರೆ. ಇಡೀ ಹೋಟೆಲಿನ ಎಲ್ಲಾ ಕೊಠಡಿ, ಬಾಗಿಲು, ಗೋಡೆ, ಕಂಬಗಳಷ್ಟೇ ಅಲ್ಲದೆ, ಛಿಲ್ಲಿಂಗ್ ಬೀರ್/ವೈನ್ ಅನ್ನು (ಛಿಲ್ಡ್) ಐಸ್ ನಿಂದಲೇ ತಯಾರಿಸಿದ ಲೋಟಗಳಲ್ಲಿ ವಿತರಿಸುವುದು ಇಲ್ಲಿಯ ಮತ್ತೊಂದು ಆಕರ್ಷಣೆ. 
Snowmobile


Feeling the snowmobile ride



















ಇಷ್ಟೆಲ್ಲ ಚಟುವಟಿಕೆಗಳಿಂದ ಪುಳಕಗೊಂಡಿದ್ದರೂ, ಇಡೀ ಪ್ರವಾಸದಲ್ಲಿ ನಮ್ಮೆಲ್ಲರ ಕಾತುರತೆಯನ್ನು ಹೆಚ್ಚಿಸಿದ ಮಹತ್ವಪೂರ್ಣ ಘ್ಹಟ್ಟವೇ "ಅರೋರ" ಬೆಳಕಿನ ದರ್ಶನ. ಸಮಾನ್ಯವಾಗಿ "ನಾರ್ದರ್ನ್ ಲೈಟ್ಸ್" (northern lights) ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿರುವ ಅರೋರ (ಲ್ಯಾಟಿನ್ ಭಾಷೆಯಲ್ಲಿ ಸೂರ್ಯೋದಯ ಎಂದರ್ಥ), ಪ್ರಕೃತಿಯ ಅತ್ಯದ್ಭುತ ವಿಸ್ಮಯಗಳಲ್ಲೊಂದು. ವಾಸ್ತವದಲ್ಲಿ ಸೂರ್ಯನಿಂದ ಬರುವ ವಿದ್ಯುತ್ಕಾಂತೀಯ / ವಿದ್ಯುತ್ ಪೂರಕ ಕಣಗಳ ನಡುವೆ ಉಂಟಾಗುವ ಘರ್ಷಣೆಯಿಂದ ಮೂಡುವ ಪ್ರಕಾಶಮಾನವಾದ ಸ್ವಾಭಾವಿಕ ಬೆಳಕೇ ಅರೋರ. ವಿವಿಧ ವಿನ್ಯಾಸಗಳಿಂದ ಕೂಡಿದ, ಮಂದ ಹಸಿರು, ಹಳದಿ ಮತ್ತು ಗುಲಾಬಿ ಮಿಶ್ರಿತ ವರ್ಣಗಳಲ್ಲಿ ಗೋಚರಿಸುವ ಅರೋರವನ್ನು, ಉತ್ತರ ಗೋಳಾರ್ಧದಲ್ಲಿ “ಅರೋರ ಬೊರೆಯಲಿಸ್”  ('Aurora borealis') ಎಂದೂ, ದಕ್ಷಿಣ ಗೋಳಾರ್ಧದಲ್ಲಿ “ಅರೋರ ಆಸ್ಟ್ರೇಲಿಸ್/ ಆಸ್ಟ್ರಾಲಿಸ್” ( 'Aurora australis') ಎಂದೂ ಕರೆಯುತ್ತಾರೆ. ಹೆಪ್ಪುಗಟ್ಟಿದ ಸರೋವರದ ಮೇಲೆ, ಗಂಟೆಗಟ್ಟಲೆ ಕುಳಿತು, ಅರೋರಕ್ಕಾಗಿ ಕಾದು ನಿರಾಸೆಗೊಂಡು ಹಿಂದಿರುಗಿದ್ದ ಸಾಕಷ್ಟು ಉದಾಹರಣೆಗಳನ್ನು ಕಂಡು, ಕೇಳಿದ್ದ ನಮಗೆ, ಪ್ರವಾಸದ ಎರಡನೆಯ ದಿನವೇ ಅರೋರ ದರ್ಶನ ಭಾಗ್ಯದಿಂದ, ಮರುಭೂಮಿಯಲ್ಲಿ ಓಯಾಸಿಸ್ ಕಂಡಷ್ಟೇ ಸಂತೋಷವಾಯಿತು.
Aurora

ಅಂದು ಪ್ರವಾಸದ ಕಟ್ಟಕಡೆಯ ದಿನ, ಒಲ್ಲದ ಮನಸ್ಸಿನಿಂದ ಕಿರೂನಕ್ಕೆ ಟಾಟಾ/ ಬೈ ಬೈ ಹೇಳುವ ಅನಿವಾರ್ಯ ಎಲ್ಲರ ಮುಖದಲ್ಲೂ ಎದ್ದು ಕಾಣುತ್ತಿತ್ತು. ಆರಂಭದಲ್ಲಿ ಪರಸ್ಪರ ಪರಿಚಯವೇ ಇಲ್ಲದಿದ್ದ ನಮ್ಮೆಲ್ಲೆರಿಗೂ, ಹೊರಡುವ ದಿನ ಎಲ್ಲಿಲ್ಲದ ದುಃಖ. ಜೊತೆಗಿದ್ದ ನಾಲ್ಕೇ ದಿನಗಳಲ್ಲಿ ಬೆಳೆದ ಬಾಂಧವ್ಯ, ನಮ್ಮೆಲ್ಲರನ್ನೂ ಒಂದು ತಂಡವಾಗಿ ಮಾರ್ಪಡಿಸಿತ್ತು. ಪರಸ್ಪರ ಸಹಕಾರ, ಹಾಸ್ಯ, ತಮಾಷೆ, ಮೋಜು ಇತ್ಯಾದಿ, ನಮ್ಮ ಗುಂಪಿನ ಅವಿಭಾಜ್ಯ ಅಂಗಗಳಾಗಿದ್ದವು. ವಿಭಿನ್ನ ಸಂಸ್ಕೃತಿಗಳು ಒಂದು ಸೂರಿನಡಿ ಬೆರೆತಾಗ ದೊರಕುವ ಹೊಸ ಅನುಭವಕ್ಕೆ ಈ ಪ್ರವಾಸ ಸಾಕ್ಷಿಯಾಯಿತು. ಎಲ್ಲಕ್ಕಿಂತ ಮಿಗಿಲಾಗಿ, ನಿರೀಕ್ಷೆಗೂ ಮತ್ತು ವಾಸ್ತವಕ್ಕೂ ಇರುವ ನಿಜವಾದ ವ್ಯತ್ಯಾಸ ಏನೆಂಬುದು ಈ ಪ್ರವಾಸದಿಂದ ನನಗೆ ಬಹಳ ಚೆನ್ನಾಗಿ ಮನದಟ್ಟಾಯಿತು. 


Northern Lights (Aurora)


Ice Hotel
Carving in the Ice Hotel



Carving the Polar Bear 


Ice Pillars